ಕಾಮ

 ಚತುರ್ವಿಧ ಪುರುಷಾರ್ಥಗಳಲ್ಲಿ ಒಂದು. ತೃತೀಯ ಪುರುಷಾರ್ಥ ಎನ್ನುವುದಿದೆ. ಬ್ರಹ್ಮನ ಹೃದಯ ಇಚ್ಛಾರೂಪ ಕಾಮದ ಉತ್ಪತ್ತಿಸ್ಥಾನ. ರಜೋಗುಣದಿಂದ ಇದು ಉತ್ಪನ್ನವಾಗಿದೆ. ಭೂಮಿಯಲ್ಲಿ ಹುಟ್ಟಿದ ಕೂಡಲೇ ಪ್ರಾಣಿಗಳಿಗೆ ಕಾಮವೆಂಬುದು ಇರಕೂಡದೆಂದು ಬ್ರಹ್ಮನ ಶಾಪ. ಅನುಭವಿಸುವುದರಿಂದ ಕಾಮ ನಶಿಸುವುದಿಲ್ಲ, ಹೆಚ್ಚುತ್ತದೆ. ಬಯಸಿದುದನ್ನು ಕೊಡುವ ವಿಷ್ಣುವಿಗೂ ಗಣಗಳ ಅಧಿಪನಾದ ಮಹಾದೇವನಿಗೂ ಕಾಮನೆಂಬ ಹೆಸರಿದೆ. ಶ್ರೀಕೃಷ್ಣನ ಮಕ್ಕಳಲ್ಲಿ ಕಾಮನೂ ಒಬ್ಬ. ಮದನ, ಮನ್ಮಥ, ಮಾರ, ಪ್ರದ್ಯುಮ್ನ, ಮೀನಕೇತನ, ಕಂದರ್ಪ, ಪಂಚಶರ, ಸ್ಮರ-ಇತ್ಯಾದಿ ಹೆಸರುಗಳಿಂದ ಈತ ಪ್ರಸಿದ್ಧ. ನಾಯಕ ನಾಯಕಿಯರ ಮೇಳನ ಕಾರ್ಯದಲ್ಲಿ ಈತನದೇ ಮುಖ್ಯಪಾತ್ರ. ರೂಪದಲ್ಲಿ ಈತ ಅತ್ಯಂತ ಮನೋಹರ. ಈಶ್ವರನ ಹಣೆಗಣ್ಣಿನ ದೃಷ್ಟಿಯಿಂದ ಸುಟ್ಟು ಭಸ್ಮವಾಗಿ ಶರೀರವಿಲ್ಲದವನಾದ (ಆತನು). ಈ ವೃತ್ತಾಂತ ಕಾಳಿದಾಸನ ಕುಮಾರಸಂಭವದಲ್ಲಿ ರಮ್ಯವಾಗಿ ವರ್ಣಿತವಾಗಿದೆ. ಕಬ್ಬು ಈತನ ಬಿಲ್ಲು. ಅರವಿಂದ, ಅಶೋಕ, ಚೂತ, ಮಲ್ಲಿಕಾ, ನೀಲೋತ್ಪಲ-ಈ ಐದು ವಿಧ ಹೂಗಳು ಈತನ ಬಾಣಗಳು. ಮೀನು ಈತನ ಧ್ವಜದ ಸಂಕೇತ. ವಸಂತಋತು ಈತನ ಮಂತ್ರಿ. ರತಿ ಈತನ ಹೆಂಡತಿ. ಕಾಮ ಶಿವನ ಮೇಲೆ ಯುದ್ಧಮಾಡಿ ಗೆದ್ದ ಕಥೆಯನ್ನು ಕನ್ನಡಕವಿ ಆಂಡಯ್ಯ ತನ್ನ ಕಾವನಗೆಲ್ಲಂ ಎಂಬ ಕಾವ್ಯದಲ್ಲಿ ಬಿತ್ತರಿಸಿದ್ದಾನೆ.

 ಪಾಡ್ಯ ಮೊದಲಾದ ಹದಿನೈದು ತಿಥಿಗಳಿಗನುಗುಣವಾಗಿ ಪ್ರತಿಯೊಬ್ಬ ಮನುಷ್ಯನಲ್ಲೂ ಪಾದಾಂಗುಷ್ಠ, ಗುಲ್ಫ, ಊರು, ಭಗ, ನಾಭಿ, ಎದೆ, ಹೃದಯ, ಕಕ್ಷ, ಕಂಠ, ಓಷ್ಠ, ಗಂಡ, ನಯನ, ಶ್ರವಣ, ಲಲಾಟ, ಶಿಖೆ-ಈ ಹದಿನೈದು ಸ್ಥಾನಗಳಲ್ಲಿ ಯಥಾಕ್ರಮವಾಗಿ ಸ್ತ್ರೀಯರಿಗೆ ಎಡಪಾಶ್ರ್ವದಲ್ಲೂ ಪುರುಷರಿಗೆ ಬಲಪಾಶ್ರ್ವದಲ್ಲೂ ಕಾಮ ಸಂಚರಿಸುತ್ತಾನೆ.   

 (ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ